ಮ್ಯಾಂಗ್ರೋವ್ ಸಸ್ಯವರ್ಗ - 
ಅತಿ ಹೆಚ್ಚು ಲವಣ (ಸೋಡಿಯಮ್ ಕ್ಲೋರೈಡ್) ಇರುವಂಥ ಜೌಗುಪ್ರದೇಶಗಳಲ್ಲಿ ಮಾತ್ರ ಬೆಳೆಯುವ ವಿಶಿಷ್ಟ ಸಸ್ಯವರ್ಗ. ಇವನ್ನು ಉಷ್ಣ ಹಾಗೂ ಉಪೋಷ್ಣವಲಯಗಳ ಕರಾವಳಿ ಪ್ರದೇಶಗಳಲ್ಲಿ, ನದೀಮುಖಜ ಭೂಮಿಗಳಲ್ಲಿ ಕಾಣಬಹುದು. ಭಾರತದಲ್ಲಿ ಪಶ್ಚಿಮ ಬಂಗಾಲದ ಸುಂದರಬನ್, ಭಾರತ ಬರ್ಮಗಳ ನದೀಮುಖಜ ಪ್ರದೇಶಗಳು, ಮುಂಬಯಿಯಿಂದ ಕೇರಳದವರೆಗೆ ಅಲ್ಲಲ್ಲಿ, ಕಡಲ ತಡಿಗಳು. ಮದರಾಸಿನ ಎನ್ನೋರ್ ಮತ್ತು ಪಿಚಾವರಮ್ ತೀರಗಳು, ಗೋದಾವರಿ ನದಿ ಸಮುದ್ರ ಸೇರುವೆಡೆ, ಅಂಡಮಾನ್ - ನಿಕೋಬಾರ್ ದ್ವೀಪ ಸಮೂಹಗಳು ಇಂಥ ಸಸ್ಯವರ್ಗಕ್ಕೆ ಹೆಸರಾಂತಿವೆ. ಪಶ್ಚಿಮ ಬಂಗಾಲದ ಸುಂದರಬನ್ ಪ್ರದೇಶ ಸು. 6000 ಚಕಿಮೀ. ವಿಸ್ತಾರವಾಗಿದ್ದು ಪ್ರಪಂಚದಲ್ಲೇ ಅತಿ ದೊಡ್ಡ ಮ್ಯಾಂಗ್ರೋವ್ ಕಾಡು ಎನಿಸಿಕೊಂಡಿದೆ. ಇವು ಬೆಳೆಯುವ ನೀರಿನಲ್ಲಿ ಅತಿಯಾದ ಮೊತ್ತದ ಉಪ್ಪು ಇದೆಯಲ್ಲದೆ ಈ ಪ್ರದೇಶದಲ್ಲಿ ವಿಪರೀತ ಮಳೆ. ವಾಯುಮಂಡಲದಲ್ಲಿ ಹೆಚ್ಚು ಆದ್ರ್ರತೆ, ಹೆಚ್ಚು ಉಷ್ಣತೆ ಮತ್ತು ಸಡಿಲವಾದ ಮರಳು ಮಣ್ಣು ಇರುವುದರಿಂದ ಇಲ್ಲಿನ ಸಸ್ಯಜಾತಿಗಳು ಇಂಥ ನೆಲದಲ್ಲಿ ಬೆಳೆಯಲು ಅನುಕೂಲವಾಗುವಂತೆ ಹಲವಾರು ತೆರನ ಹೊಂದಾಣಿಕೆಗಳನ್ನು ರೂಪಿಸಿಕೊಂಡಿದೆ. ಈ ಸಸ್ಯವರ್ಗಕ್ಕೆ ಉಪ್ಪು ನೀರಿನ ಸಸ್ಯಗಳು (ಹಾಲೊಫೈಟ್ಸ್) ಎಂಬ ಹೆಸರೇ ಇದೆ.

ಪ್ರಪಂಚದ ಎಲ್ಲ ಮ್ಯಾಂಗ್ರೋವ್ ಕಾಡುಗಳಲ್ಲಿ ಸುಮಾರು 75 ಕುಟುಂಬಗಳಿಗೆ ಸೇರಿದ 334 ಪ್ರಭೇದಗಳು ಬೆಳೆಯುತ್ತವೆ ಎಂದು ಅಂದಾಜು ಮಾಡಲಾಗಿದೆ. ಭಾರತದಲ್ಲಿ 12 ಕುಟುಂಬಗಳಿಗೆ ಸೇರಿದ 20 ಕ್ಕೂ ಹೆಚ್ಚು ಸಸ್ಯಗಳು ಕಂಡುಬರುತ್ತವೆ. ಇವುಗಳ ಪೈಕಿ ಮುಖ್ಯವಾದವು: ರೈಜೊಫೊರ, ಸೀರಿಯಾಪ್ಸ್, ಕ್ಯಾಂಡೆಲಿಯ, ಬ್ರುಗ್ವೀರ (ರೈಜೊಫೊರೇಸೀ), ಎಕ್ಸೊಕೇರಿಯ (ಯುಫೋರ್ಬಿಯೇಸೀ), ಅವಿಸಿನಿಯ (ನರ್ಬಿನೇಸೀ), ಸ್ಯಾಲಿಕಾರ್ನಿಯ (ಕೀನೊಪೋಡೀಯೇಸೀ) ಈಜಿಸಿರಸ್ (ಮಿರ್ಸಿನೇಸೀ), ಲುಮ್ನಿಟ್ಸೆರಾ (ಕಾಂಬ್ರಿಟೇಸೀ), ಅಕ್ಯಾಂತಸ್ (ಅಕ್ಯಾಂತೇಸೀ) ಸೊನರೇಷಿಯ (ಸೊನರೇಷಿಯೆಸೀ) ಇತ್ಯಾದಿ. ಜೊತೆಗೆ ಕೆಲವು ಆರ್ಕಿಡ್ ಸಸ್ಯಗಳೂ ಜರೀಗಿಡಗಳೂ ಕಾಣದೊರೆಯುತ್ತವೆ.

ಮ್ಯಾಂಗ್ರೋವ್ ಸಸ್ಯಗಳು ತಮ್ಮ ವಿಚಿತ್ರ ಪರಿಸರಕ್ಕೆ ಹೊಂದಿಕೊಳ್ಳುವ ಸಲುವಾಗಿ ತಮ್ಮ ಲಕ್ಷಣಗಳಲ್ಲೂ ಸ್ವಭಾವಗಳಲ್ಲೂ ಅನೇಕ ಮಾರ್ಪಾಟುಗಳನ್ನು ರೂಪಿಸಿಕೊಂಡಿವೆ ಎಂದು ಹೇಳಿದೆಯಷ್ಟೆ. ಇಂಥ ಹೊಂದಾಣಿಕೆಗಳು ಈ ಮುಂದಿನಂತಿವೆ :

1. ಇವು ಬೆಳೆಯುವ ನೆಲದಲ್ಲಿ ವಿಪರೀತ ನೀರಿರುವುದರಿಂದ ಬೇರುಗಳ ಉಸಿರಾಟಕ್ಕೆ ಸಾಕಷ್ಟು ಆಕ್ಸಿಜನ್ ದೊರಕದು. ಈ ಕೊರತೆಯನ್ನು ನಿವಾರಿಸಿ ಸರಾಗವಾಗಿ ಉಸಿರಾಡಲು ಸಹಾಯಕವಾಗುವಂತೆ ಈ ಸಸ್ಯಗಳ ಕೆಲವು ಬೇರುಗಳು ಊಧ್ರ್ವಮುಖವಾಗಿ ಬೆಳೆದು 	ನೆಲದಿಂದ ಹೊರ ಚಾಚಿರುತ್ತವೆ. ಉಸಿರಾಟದ ಸೌಲಭ್ಯಕ್ಕೆ ಇವುಗಳ ಮೇಲ್ಮೈಯಲ್ಲಿ ಸೂಕ್ಷ್ಮವಾದ ರಂಧ್ರಗಳಿರುತ್ತವೆ. ಇಂಥ ಬೇರುಗಳಿಗೆ ನ್ಯೂಮ್ಯಾಟೊಫೋರ್ಸ್ ಎಂದು ಹೆಸರು.

2. ಇಲ್ಲಿನ ಮಣ್ಣು ತುಂಬ ಸಡಿಲವಾಗಿರವುದರಿಂದ ಗಿಡಗಳು ಸಲೀಸಾಗಿ ನೆಟ್ಟಗೆ ಬೆಳೆಯವು. ಗಿಡಗಳಿಗೆ ಸರಿಯಾದ ಆಧಾರ ಒದಗಿಸುವ ಸಲುವಾಗಿ ಬಿಳಲುಬೇರು ಮತ್ತು ಆಧಾರ ಬೇರುಗಳು ಹುಟ್ಟುತ್ತವೆ.

3. ಈ ಗಿಡಗಳ ಬೀಜಗಳು ನೆಲದ ಮೇಲೆ ಬಿದ್ದಾಗ ಅತಿಯಾದ ನೀರಿನ ದೆಸೆಯಿಂದ ಮೊಳೆಯಲಾರವು. ಈ ಕೊರತೆಯನ್ನು ನಿವಾರಿಸುವ ಸಲುವಾಗಿ ಬೀಜಗಳು (ಹಣ್ಣುಗಳೂ) ಗಿಡದಿಂದ ಬೀಳುವ ಮೊದಲೇ ಅಂದರೆ ಸಸ್ಯಕ್ಕೆ ಅಂಟಿಕೊಂಡಿರುವಾಗಲೇ ಮೊಳೆತು ಒಳಗಿನ ಹೈಪೊಕಾಟೈಲ್ ಭಾಗ ಹೊರಬಂದಿರುತ್ತದೆ. ಒಂದು ರೀತಿಯಲ್ಲಿ ಬೀಜ ಪುಟ್ಟ ಸಸಿಯಾಗಿಯೇ ಗಿಡದಿಂದ ಬೇರ್ಪಡುತ್ತದೆ. ಇದು ನೆಲಕ್ಕೆ ಬಿದ್ದು ಕತ್ತಿಯಂತೆ ಮಣ್ಣಿನೊಳಕ್ಕೆ ಸಿಕ್ಕಿಕೊಂಡು ಕೆಲಕಾಲಾನಂತರ ಬೆಳೆಯತೊಡಗುತ್ತದೆ. ಈ ಲಕ್ಷಣಕ್ಕೆ ವೈವಿಪ್ಯಾರಿ ಎಂದು ಹೆಸರು.

4. ಮ್ಯಾಂಗ್ರೋವ್ ಸಸ್ಯಗಳ ಎಲೆಗಳು ರಸಭರಿತವಾಗಿದ್ದು ಮಾಂಸಲವಾಗಿದೆ. ಜೊತೆಗೆ ಗಿಡಗಳ ಆಸ್ಮಾಟಿಕ್ ಒತ್ತಡ ಹೊರಗಿನ ನೀರಿನದಕ್ಕಿಂತ ಹೆಚ್ಚಾಗಿರುತ್ತದೆ. ಇದರಿಂದ ನೀರನ್ನು ಹೀರಲು ಅನುಕೂಲವಾಗಿದೆ. 
ಮ್ಯಾಂಗ್ರೋವ್ ಸಸ್ಯಗಳು ಉರುವಲು ಮತ್ತು ಮರಮುಟ್ಟುಗಳಿಗಾಗಿ ಉಪಯುಕ್ತವಾಗಿವೆ. ಜೊತೆಗೆ ಮಣ್ಣಿನ ಸವಕಳಿಯನ್ನು ತಡೆಯುವಲ್ಲಿ ಇವು ಸಹಾಯಕ.									 
 (ಎ.ಎನ್.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ